ಕೂಡಲಿ	
ಕರ್ನಾಟಕ ರಾಜ್ಯದ ಶಿವಮೊಗ್ಗ ತಾಲ್ಲೂಕಿನಲ್ಲಿರುವ ಪ್ರಮುಖ ಯಾತ್ರಾಸ್ಥಳ ಹಾಗೂ ತುಂಗಾ ಮತ್ತು ಭದ್ರಾ ನದಿಗಳ ಸಂಗಮಸ್ಥಳ. ಸುಮಾರು 500 ವರ್ಷಗಳ ಹಿಂದೆ ಮರಾಠಾ ಸ್ಮಾರ್ತರ ಸಲುವಾಗಿ ಇಲ್ಲಿ ಒಂದು ಶಂಕರ ಮಠವನ್ನು ಸ್ಥಾಪಿಸಲಾಯಿತು. ಅದು ಕೊಡಲಿ ಶೃಂಗೇರಿ ಮಠವೆಂಬ ಹೆಸರಿನಿಂದ ಮುಂದುವರಿಯುತ್ತಿದೆ. ಇಲ್ಲೊಂದು ಮಾಧ್ವಮಠವೂ ಉಂಟು. 1791ರಲ್ಲಿ ಮರಾಠರು ಈ ಊರನ್ನು ಲೂಟಿ ಮಾಡಿ ಇದಕ್ಕೆ ಬೆಂಕಿ ಇಟ್ಟರು. ಕೂಡಲಿಯ ಗುರುಗಳ ಅನುಯಾಯಿಗಳಾಗಿದ್ದ ಅವರು ಮಠದ ಬಹಿಷ್ಕಾರಕ್ಕೆ ಒಳಗಾಗಬೇಕಾಗಿಬಂದಾಗ ಸೂಕ್ತ ಕಾಣಿಕೆಗಳನ್ನೊಪ್ಪಿಸಿದರು. 

ಇಲ್ಲಿ ಬ್ರಹ್ಮೇಶ್ವರ, ರಾಮೇಶ್ವರ ಮತ್ತು ನರಸಿಂಹ ದೇವರ ಆಲಯಗಳಿವೆ. ಕದಂಬ, ಹೊಯ್ಸಳ, ವಿಜಯನಗರ, ಕೆಳದಿನಾಯಕ ಮುಂತಾದ ರಾಜಮನೆತನಗಳಿಗೆ ಸೇರಿದ ಶಾಸನಗಳೂ ದೊರಕಿವೆ. ಹೊಯ್ಸಳರಿಗೂ ಸೇವುಣರಿಗೂ ಇಲ್ಲಿ ಅನೇಕ ಯುದ್ಧಗಳು ನಡೆದುವೆಂಬ ಸಂಗತಿ ಶಾಸನಗಳಿಂದ ಗೊತ್ತಾಗುತ್ತದೆ. ಆ ಕಾಲದ ಕೋಟೆಯ ಅವಶೇಷಗಳು ಇಂದಿಗೂ ಕಾಣಬರುತ್ತವೆ.

 (ಎ.ವಿ.ಎನ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ